"ಎಲ್ಲರಿಗಾಗಿ ನಾನು, ನನಗಾಗಿ ಎಲ್ಲರೂ" ಎಂಬ ಧ್ಯೇಯವು ಇಂದು ಸಹಕಾರ ಸಂಘಗಳ ಉದಯಕ್ಕೆ
ಪ್ರೇರಣಾದಾಯಿಯಾಗಿದೆ. ನಮ್ಮ ಸಹಕಾರ ಸಂಘವು ಕೂಡ ಈ ಪ್ರೇರಣೆಯಿಂದಲೇ ಉದಯಿಸಿರುವಂತದ್ದು.
ದೃಷ್ಟಿಯುಳ್ಳವರ ಸಹಕಾರ ಸಂಘದಷ್ಟೇ ಸರಿಸಾಟಿಯಾಗಿ ಇಂದು ಈ ಸಹಕಾರ ಸಂಘವು ಕಾರ್ಯನಿರತವಾಗಿದೆ.
ಇದು ನಮ್ಮೆಲ್ಲರ ಹೆಮ್ಮೆಯ ಸಂಕೇತವಾಗಿದೆ.
ಒಂದು ಶತಮಾನಕ್ಕೂ ಮುನ್ನ ಭಾರತದಲ್ಲಿ ಸಹಕಾರ ಚಳುವಳಿಯ
ಪಿತಾಮಹರೆನಿಸಿದ ಮತ್ತು ಅಂದಿನ ಮದರಾಸು ಪ್ರಾಂತ್ಯದ ತಿರುವಲ್ನೇಲಿ, ಮದರಾಸು ಮತ್ತು ಕೊಯಂಬತ್ತೂರು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿದ್ದ sir
Frederic Nicholson ರವರು ಸಹಕಾರ ಕ್ಷೇತ್ರದ ಬೆಳವಣಿಗೆಗೆ
ವ್ಯವಸ್ಥಿತವಾಗಿ ರೂಪುರೇಷೆಯನ್ನು ಅನುಷ್ಠಾನಗೊಳಿಸಿದರು. ಬೆಂಗಾಳ ಮತ್ತು ಮಹರಾಷ್ಟ್ರ
ರಾಜ್ಯಗಳಲ್ಲಿ ಸಹಕಾರ ಚಳುವಳಿ ಆರಂಭವಾಗುತ್ತಿದ್ದ ಹೊತ್ತಲ್ಲೇ ನಮ್ಮ ರಾಜ್ಯದಲ್ಲಿಯೂ ಸಹಕಾರ
ಚಳುವಳಿ ಪ್ರವರ್ಧನೆಗೊಳ್ಳಲು ಆರಂಭವಾಯಿತು. ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದ ಸಣ್ಣರಾಮನಗೌಡ
ಸಿದ್ದರಾಮನಗೌಡ ಪಾಟೀಲ (ಎಸ್.ಎಸ್.ಪಾಟೀಲ) ರವರು 1904ರಲ್ಲಿ ಕೆಲ ಸಮಾನ ಮನಸ್ಕ ರೈತರನ್ನು
ಒಗ್ಗೂಡಿಸಿ ಕೃಷಿ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸಿದರು. ಆ ಸಂಘ ದೇಶದ ಮೊದಲ ಕೃಷಿ ಪತ್ತಿನ
ಸಹಕಾರ ಸಂಘವೆನಿಸಿತು. ಇಂದು ವಿವಿಧ ವಿಷಯಗಳ ಆಧಾರದಲ್ಲಿ ಸಹಕಾರ ಸಂಘಗಳ ಇತಿಹಾಸವನ್ನು ನಾವು
ನೋಡಬಹುದಾಗಿದೆ.
ಕರ್ನಾಟಕ ರಾಜ್ಯ ಅಂಧ ನೌಕರರ ಸಹಕಾರ ಸಂಘ
ಸ್ಥಾಪನೆಯಾಗುವುದಕ್ಕೂ ಮುನ್ನ ರಾಜ್ಯದಲ್ಲಿ ಹಲವಾರು ಕಡೆ ಸಹಕಾರ ಕ್ಷೇತ್ರದಲ್ಲಿ ಅಂಧರ
ಪ್ರವೇಶಕ್ಕಾಗಿ ಪ್ರಯತ್ನಗಳು ನಡೆದವು. ಇಂತಹ ಪ್ರಯತ್ನಗಳಲ್ಲಿ ಸಹಕಾರ ಸಂಘದ ಸದಸ್ಯರು, ಸದಸ್ಯರಲ್ಲದವರು ಹಾಗೂ ನಿರುದ್ಯೋಗಿಗಳು ಸೇರಿದ್ದಾರೆ.
ಅಂಧರಿಂದಲೇ ಆರಂಭಗೊಂಡ ಸಹಕಾರ ಚಳುವಳಿಯನ್ನು ಮುಕ್ತ ಜ್ಞಾನಕೋಶ ಜಾಲತಾಣಗಳಲ್ಲಿ ದಾಖಲಿಸಿ ಮುಂದಿನ
ಪೀಳಿಗೆಯವರಿಗೂ ತಿಳಿಯಪಡಿಸುವ ಕಾರ್ಯವು ನಡೆಯಬೇಕಿದೆ. ಅಂತಹ ಪ್ರಯತ್ನ ಸಾಧ್ಯವಾಗಬೇಕೆಂದರೆ ಈ
ಸಹಕಾರ ಸಂಘದ ಸದಸ್ಯರು ಮಾಹಿತಿಯನ್ನು ಕಲೆಹಾಕಲು ಮುಂದಾಗಬೇಕು. ಸಹಕಾರ ಸಂಘವು ಇಂತಹ ಕೆಲಸಗಳನ್ನು
ಪ್ರೋತ್ಸಾಹಿಸುತ್ತದೆ.
ಕರ್ನಾಟಕ ರಾಜ್ಯ ಅಂಧ ನೌಕರರ ಸಹಕಾರ ಸಂಘ
ಸ್ಥಾಪನೆಯ ಪ್ರಮುಖ ಘಟ್ಟಗಳು:
೧. ಹಲವಾರು ದಶಕಗಳಿಂದಲೂ ಸಹಕಾರ ಕ್ಷೇತ್ರದ ತತ್ವಗಳ
ಆಧಾರದಲ್ಲಿ ಅನೌಪಚಾರಿಕ ಗುಂಪುಗಳನ್ನು ರಚಿಸಿಕೊಂಡು ವಿವಿಧ ಸ್ವರೂಪಗಳಲ್ಲಿ ಆರ್ಥಿಕ
ಚಟುವಟಿಕೆಗಳನ್ನು ನಮ್ಮ ಸಮುದಾಯದ ಹಿರಿಯರು ಕೈಗೊಂಡು ಅಂಧರ ಆರ್ಥಿಕ ಸಶಕ್ತಿಕರಣಕ್ಕಾಗಿ ಅಳಿಲು
ಸೇವೆ ಸಲ್ಲಿಸಲು ಆರಂಭಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘಕ್ಕೆ ಮತ್ತು ಅಂಧ
ನೌಕರರ ಸಹಕಾರ ಸಂಘಕ್ಕೆ ಸದಸ್ಯರಾಗಿರುವವರು ಇದರ ಅಸ್ತಿತ್ವದ ರುವಾರಿಗಳೆಂದು ಆಡಳಿತ ಮಂಡಳಿಯು
ಹೃತ್ಪೂರ್ವಕವಾಗಿ ಹೆಮ್ಮೆಪಡುತ್ತದೆ.
೨. ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘಟನೆಯ ಮೊದಲ
ಸರ್ವ ಸದಸ್ಯರ ಸಭೆಯು ದಿನಾಂಕ ೧೫/೦೪/೨೦೧೮ರಂದು ಹುಬ್ಬಳ್ಳಿಯ ಸಿದ್ಧಾರೂಢ ಮಠದ ಆವರಣದಲ್ಲಿರುವ
ಸರ್ಕಾರಿ ಅಂಧ ಮಕ್ಕಳ ಪಾಠಶಾಲೆಯಲ್ಲಿ ಜರುಗಿತು. ಈ ಸಭೆಯಲ್ಲಿ ಸಹಕಾರ ಸಂಘವನ್ನು ಸ್ಥಾಪಿಸಲು
ಕಾರ್ಯಕಾರಿ ಮಂಡಳಿಗೆ ಅಧಿಕಾರವಹಿಸಲು ನಿರ್ಣಯ ಕೈಗೊಳ್ಳಲಾಯಿತು.
3. 29/04/2018ರಂದು ರಾಜ್ಯ ಸರ್ಕಾರಿ ಅಂಧ ನೌಕರರ ಸಂಘದ
ಕಾರ್ಯಕಾರಿ ಸಮಿತಿಯ ಮೊದಲನೆ ಸಭೆಯಲ್ಲಿ ಸಹಕಾರ ಸಂಘದ ಸ್ಥಾಪನೆಗೆ ಪೂರಕವಾಗಿ ಪ್ರಾಥಮಿಕ
ಮಾಹಿತಿಯನ್ನು ರಾಜ್ಯ ಪರಿಷತ್ತಿನಲ್ಲಿ ಹಂಚಿಕೊಳ್ಳಲು ಉಪಾಧ್ಯಕ್ಷರಾದ ಶ್ರೀಯುತ ಕುಪೇಂದ್ರ,
ಇಂದಿನ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಚಿಕ್ಕಬಳ್ಳಾಪುರ
ಜಿಲ್ಲಾ ಸಂಘಟಕರಾಗಿರುವ ಶ್ರೀ ಮಂಜುನಾಥ್ B C ಮತ್ತು
ಬೆಂಗಳೂರು ವಿಭಾಗೀಯ ನಿರ್ದೇಶಕರಾದ ಶ್ರೀಯುತ ರಜಾಕ್ ಸಾಬ್ ಟೇಲರ್ ಇವರನ್ನೊಳಗೊಂಡ
ಸಮೀತಿಯೊಂದನ್ನು ರಚಿಸಲು ನಿರ್ಧರಿಸಲಾಯಿತು.
೪. ೧೦/೦೬/೨೦೧೮ರ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘದ
ರಾಜ್ಯಪರಿಷತ್ತಿನ ಮೊದಲನೆ ಸಭೆಯಲ್ಲಿ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕುಮಾರ್ YS
ರವರಿಂದ ಸಹಕಾರ ಸಂಘದ ಸ್ಥಾಪನೆಗೆ ಪೂರಕವಾದ ಪ್ರಾಥಮಿಕ
ವಿವರಗಳನ್ನು ಹಾಜರಿದ್ದ ಪದಾಧಿಕಾರಿಗಳಿಗೆ ತಿಳಿಸಲಾಯಿತು. ಪದಾಧಿಕಾರಿಗಳೆಲ್ಲ ಸಹಕಾರ ಸಂಘದ
ರಚನೆಗೆ ಶ್ರಮಿಸಲು ನಿರ್ಣಯ ಕೈಗೊಂಡರು.
೫. ದಿನಾಂಕ: 26/೦೮/2018ರ ಕರ್ನಾಟಕ ರಾಜ್ಯ ಸರ್ಕಾರಿ ಅಂಧ
ನೌಕರರ ಸಂಘದ ಕಾರ್ಯಕಾರಿ ಸಮಿತಿಯ ಮೂರನೆ ಸಭೆಯಲ್ಲಿ ಸಹಕಾರ ಸಂಸ್ಥೆಯ ಸ್ಥಾಪನೆಗೆ ಚಾಲನೆ ನೀಡಲು
೯ ಸದಸ್ಯರ ತಾತ್ಕಾಲಿಕ ಸಮೀತಿಯನ್ನು ರಚಿಸಿ ತನ್ಮೂಲಕ ಸಹಕಾರ ಸಂಘದ ಕರಡು ರಚನೆ ಮತ್ತು ವ್ಯಾಪ್ತಿ
ನಿರ್ಧರಿಸಲು ಜವಾಬ್ದಾರಿ ನೀಡಲಾಯಿತು.
ವೀರಕ್ಯಾತಯ್ಯ ಎನ್, ಯಶವಂತಕುಮಾರ್ ಹೆಚ್.ವಿ, ನೇತ್ರಾವತಿ ಎನ್,
ಶಿವಾಜಿ ವಿ ಮಾನೆ, ವೆಂಕಣ್ಣ ಕಂಬಾರ್, ರಜ಼ಾಕ್ಸಾಬ್ ಟೇಲರ್,
ಮಂಜುನಾಥ ಬಿ.ಸಿ, ವಿರುಪಾಕ್ಷಯ್ಯ ಹಾಗೂ ಖಂಡೆಪ್ಪ ಇವರು ಈ ಸಮಿತಿಯಲ್ಲಿದ್ದರು.
೬. ಬಳಿಕ ತಾತ್ಕಾಲಿಕ ಸಮಿತಿಯು ಸಭೆ ಸೇರಿ ಇನ್ನಷ್ಟು
ಸದಸ್ಯರನ್ನು ಹೊಂದಿತು. ಈ ಸಮಿತಿಯು ರಾಜ್ಯ ಸರ್ಕಾರಿ ಅಂಧ ನೌಕರರ ಸಂಘದ ಜಿಲ್ಲಾ ಸಂಘಟಕರ
ಸಹಯೋಗದಲ್ಲಿ ಬೆಳಗಾವಿ, ಬೆಂಗಳೂರು, ಬಳ್ಳಾರಿ, ದಾವಣಗೆರೆ,
ಕಲ್ಬುರ್ಗಿ, ಮೈಸೂರು, ಶಿವಮೊಗ್ಗ, ಹಾಸನ ಮತ್ತು ಇತರೇ ಜಿಲ್ಲೆಗಳ ಅಂಧ ನೌಕರರನ್ನು ಸಂಪರ್ಕಿಸಿ
ಅಭಿಪ್ರಾಯ ಸಂಗ್ರಹಿಸಿತು. ಸಹಕಾರ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಂಗಸ್ವಾಮಿ; ನಾಗೇಂದ್ರಪ್ಪ ಪಾಣೇಗಾವ್, ಅಧ್ಯಕ್ಷರು, ಕಲ್ಬುರ್ಗಿ ಜಿಲ್ಲಾ
ನ್ಯಾಯಾಲಯ ನೌಕರರ ಸಹಕಾರ ಸಂಘ; ವೀರಭದ್ರಪ್ಪ
ಕಾರ್ಯದರ್ಶಿ, ಕಲ್ಬುರ್ಗಿ ಜಿಲ್ಲಾ ನ್ಯಾಯಾಲಯ ನೌಕರರ ಸಹಕಾರ
ಸಂಘ; ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕು ಸಹಕಾರ
ಇಲಾಖೆಯ ಸಹ ನಿರ್ದೇಶಕರಾದ ಸುರೇಶ್ ತೆವಲಗಿ, ದಾವಣಗೆರೆಯಲ್ಲಿ
ಲೆಕ್ಕಪರಿಶೋಧಕರಾಗಿರುವ ರಾಜು ಮತ್ತಿತರೆ ಸಹಕಾರ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳ ಮೂಲಕ ಅಂಧ
ನೌಕರರಿಗೆ ಸಹಕಾರ ಸಂಘದ ಅನುಕೂಲತೆಗಳ ಕುರಿತು ಮಾಹಿತಿಯನ್ನು ತಿಳಿಸಲಾಯಿತು.
೭. ಸಹಕಾರ ಸಂಘದ ಸ್ಥಾಪನೆಗೆ ಪೂರಕವಾದ ಸಕರಾತ್ಮಕ
ಪ್ರತಿಕ್ರಿಯೆ ಕಂಡುಬಂದಿತು. ಇದರಿಂದ ಪ್ರೇರಣೆಗೊಂಡ ತಾತ್ಕಾಲಿಕ ಸಮಿತಿಯು ಶ್ರೀಯುತ
ವೀರಕ್ಯಾತಯ್ಯ ಎನ್ ರವರನ್ನು ಮುಖ್ಯಪ್ರವರ್ತಕರೆಂದು ಅನುಮೋದಿಸಿ ಸಹಕಾರ ಇಲಾಖೆಗೆ ಸಹಕಾರ ಸಂಘದ
ಸ್ಥಾಪನೆಯ ಪ್ರಸ್ಥಾವನೆಯನ್ನು ಸಲ್ಲಿಸಿತು.
೮. ಸಹಕಾರ ಇಲಾಖೆಯು ಸದಸ್ಯತ್ವ ನೋಂದಣಿಗೆ ಮತ್ತು ಷೇರು
ಸಂಗ್ರಹಣೆಗೆ ದಿನಾಂಕ 16/03/2020ರಂದು ಅನುಮತಿಸಿ ೯೦ ದಿನಗಳ ಗಡುವನ್ನು ನಿಗದಿಪಡಿಸಿತು.
17/03/2019ರಂದು ರಾಜ್ಯ ಸರ್ಕಾರಿ ಅಂಧ ನೌಕರರ ಸಂಘವು ಆಯೋಜಿಸಿದ್ದ ವಿಶ್ವ ಮಹಿಳಾ
ದಿನಾಚರಣೆಯಂದು ಶ್ರೀಮತಿ ಭಾಗ್ಯಲಕ್ಷ್ಮಿ.V, ಜಂಟಿ
ನಿರ್ದೇಶಕರು, ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇವರಿಂದ ಅಂಧ ನೌಕರರ ಸಹಕಾರ ಸಂಘದ ಸದಸ್ಯತ್ವ
ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ದೊರೆಯಿತು. ಸಮಿತಿಯು ಸಹಕಾರ ಇಲಾಖೆಯು ನೀಡಿದ್ದ ಅವಧಿಯೊಳಗೆ
೧೨೦ಕ್ಕೂ ಹೆಚ್ಚು ಸದಸ್ಯರನ್ನು ನೋಂದಾಯಿಸಿತು. ಈ ಅವಧಿಯಲ್ಲಿ ವೇತನ ಸಂಬಂಧಿತ ತೊಡಕುಗಳು ಅಂಧ
ನೌಕರರಿಗೆ ಎದುರಾದ್ದರಿಂದ ಸಹಕಾರ ಇಲಾಖೆಗೆ ಗಡುವನ್ನು ವಿಸ್ತರಿಸಲು ಪ್ರವರ್ತಕರು ಮನವಿ
ಸಲ್ಲಿಸಿದರು. ಸಹಕಾರ ಇಲಾಖೆಯು ಮನವಿಯನ್ನು ಸ್ವೀಕರಿಸಿ ೯೦ ದಿನಗಳಿಗೆ ವಿಸ್ತರಿಸಿತು. ೯೦
ದಿನಗಳಲ್ಲಿ ಸಹಕಾರ ಸಂಘದ ಸದಸ್ಯತ್ವವು ೪೦೭ಕ್ಕೆ ಏರಿತು. ಸಹಕಾರ ಸಂಘದ ಆಡಳಿತ ನಿಯಮಾವಳಿಗಳನ್ನು,
೧೯ ಪ್ರವರ್ತಕರ ಮತ್ತು ಸದಸ್ಯರ ವಿವರಗಳನ್ನು ಸಮಿತಿಯು
ಸಹಕಾರ ಇಲಾಖೆಗೆ ಒದಗಿಸಿತು. ಸಹಕಾರ ಸಂಘದ ಸ್ಥಾಪನೆಗೆ ಸಹಕಾರ ಇಲಾಖೆಯು ಅನುಮೋದಿಸಿ ದಿನಾಂಕ
೧೪/೦೨/೨೦೨೦ರಂದು ಅಧಿಕೃತ ಆದೇಶವನ್ನು ನೀಡಿತು.
೯. ಆಡಳಿತ ಮಂಡಳಿಯ ಚುನಾವಣೆ ಮತ್ತು ಸರ್ವ ಸದಸ್ಯರ ಸಭೆ
೧೫/೦೩/೨೦೨೦ರಂದು ನಡೆಯಿತು. ಚುನಾವಣೆಗೆ ಸ್ಪರ್ಧಿಸಿದ್ದ ೧೫ ಪದಾಧಿಕಾರಿಗಳು ಅವಿರೋಧವಾಗಿ
ಆಯ್ಕೆಗೊಂಡರು.
೧೦. ಈ ಮೇಲೆ ತಿಳಿಸಿದ ಮೈಲುಗಲ್ಲುಗಳನ್ನು ದಾಟಿ ಸಹಕಾರ
ಸಂಘವು ಇಂದು ೧೫ ಪದಾಧಿಕಾರಿಗಳ ಆಡಳಿತ ಮಂಡಳಿಯನ್ನು ಹೊಂದಿದೆ. ಕೇಂದ್ರ ಅಥವಾ ರಾಜ್ಯ ಸರ್ಕಾರಗಳ
ಅಧಿನದಲ್ಲಿರುವ ವಿವಿಧ ಇಲಾಖೆಗಳ, ನಿಗಮಗಳ, ಮಂಡಲಿಗಳ, ಅನುಧಾನಿತ
ಸಂಸ್ಥೆಗಳ ಹಾಗೂ ರಾಷ್ಟ್ರಿಕೃತ ಬ್ಯಾಂಕುಗಳ ಅಂಧ ನೌಕರರು ಸಹಕಾರ ಸಂಘದ ಪ್ರಾಥಮಿಕ
ಸದಸ್ಯರಾಗಬಹುದು. ಪ್ರಾಥಮಿಕ ಸದಸ್ಯರಿಂದ ಅನುಮೋದಿಸಿದ ವ್ಯಕ್ತಿಗಳು ಸಹ ಸದಸ್ಯತ್ವವನ್ನು
ಪಡೆಯಬಹುದು.
೧೧. ಸಹಕಾರ ಸಂಘದ ಸ್ಥಾಪನೆಯು ಪ್ರವರ್ತಕರ ಶ್ರದ್ಧಾಪೂರ್ವಕ ಬದ್ಧತೆ ಹಾಗೂ ನಿಶ್ಚಿತ ಗುರಿಯ ಪಥದ ಮೇಲೆ ನಿರ್ಮಾಣವಾಗಿದೆ. ಸಹಕಾರ ಸಂಘದ ಹೆಸರಿನಲ್ಲಿ ಅಮಾನತ್ತು ಖಾತೆಯನ್ನು ಹೊಂದಿದ ಅವಧಿಯಿಂದ ಚಾಲ್ತಿ ಖಾತೆಯನ್ನು ಹೊಂದುವ ತನಕವೂ ರಾಜ್ಯ ವ್ಯಾಪಿ ನಡೆಸಿದ ಸಭೆಗಳಿಗೆ, ತಾತ್ಕಾಲಿಕ ಸಮಿತಿಯ ಸಭೆಗಳಿಗೆ ಮತ್ತು ಸಹಕಾರ ಸಂಘದ ಅಧಿಕೃತ ಕೆಲಸಗಳಿಗೆ ಪ್ರವರ್ತಕರು ಅಂತರ್ಗತಗೊಂಡಿರುವ ಕೌಶಲ್ಯಗಳನ್ನು ಯುಕ್ತವಾಗಿ ಅನ್ವೈಸಿದ್ದಾರೆ ಹಾಗೂ ಆರ್ಥಿಕ ಸಂಪನ್ಮೂಲಗಳನ್ನು ಸ್ವಪ್ರೇರಣೆಯಿಂದ ಸ್ವಂತ ಖರ್ಚಿನಲ್ಲಿ ನಿರ್ವಹಿಸಿದ್ದಾರೆ. ವಿಶೇಷವಾಗಿ ಯಶವಂತಕುಮಾರ್ HV, ಮಂಜು BC, ರಾಘವೇಂದ್ರ ಜನಿವಾರ್, ಶಿವಾಜಿ ಮಾನೆ ಮತ್ತು ಖಂಡೆಪ್ಪ ರವರುಗಳು ಅಮೋಘ ನೆರವನ್ನು ನೀಡಿದ್ದಾರೆ. ಈ ಅವಧಿಯಲ್ಲಿ ಪ್ರವರ್ತಕರಾಗಿರದ ಸದಸ್ಯರು ಕೂಡ ಸಲಹೆ-ಸೂಚನೆಗಳನ್ನು ನೀಡಿರುತ್ತಾರೆ. ಪ್ರಮುಖವಾಗಿ ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘದ ಸಂಸ್ಥಾಪಕರಾದ ಪ್ರಶಾಂತ್ ಎಮ್.ಎನ್ ಈ ಸಹಕಾರ ಸಂಘದ ಸಂವಿಧಾನ ರಚಿಸಲು ನೆರವಾಗಿದ್ದಾರೆ. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಇನ್ನೂ ಹಲವಾರು ವ್ಯಕ್ತಿಗಳು ಸಹಕಾರ ಸಂಘದ ಸ್ಥಾಪನೆಗೆ ಶ್ರಮಿಸಿದ್ದು, ಮರೆಯುವಂತಿಲ್ಲ. ಸಂಕಲ್ಪತೊಟ್ಟಂತೆ ನಿರ್ಮಾಣವಾಗಿರುವ ಈ ಸಹಕಾರ ಸಂಘವನ್ನು ಇನ್ನಷ್ಟು ಉನ್ನತಿಗೆ ವಿಸ್ತರಿಸಲು ಸದಸ್ಯರ ಸಂಖ್ಯೆಯೂ ಹೆಚ್ಚಳವಾಗಬೇಕಿದೆ. ಆಡಳಿತ ಮಂಡಳಿಯೂ ಕೂಡ ಸಹಕಾರ ಸಂಘದ ಆರ್ಥಿಕ ಬಲವರ್ಧನೆಗೆ ಶ್ರಮಿಸುವುದೆಂದು ಈ ಮೂಲಕ ಭರವಸೆ ನೀಡುವುದು.
No comments:
Post a Comment
ಅನಿಸಿಕೆಯನ್ನು ಬರೆಯಿರಿ